ಮೆಲ್‍ವಿಲ್, ಹರ್ಮನ್
1819 - 91.  ಅಮೆರಿಕದ ಕಾದಂಬರಿಕಾರ. ಹುಟ್ಟಿದ್ದು ನ್ಯೂಯಾರ್ಕ್ ನಗರದಲ್ಲಿ. ಹನ್ನೆರಡನೆಯ ವಯಸ್ಸಿನಲ್ಲಿ ತಂದೆ ಸತ್ತದ್ದರಿಂದ ಓದುಬಿಟ್ಟು ಕೆಲಸಕ್ಕೆ ಸೇರಿದ. ಗುಮಾಸ್ತನಾಗಿ, ಉಪಾಧ್ಯಾಯನಾಗಿ, ರೈತನಾಗಿ ದುಡಿದು ಕಡೆಗೆ ಅಕಷನಟ್ ಎಂಬ ಮೀನುಬೇಟೆಯ ಹಡಗಿನಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ. ಈ ಅನುಭವದ ಫಲವಾಗಿ ಮುಂದೆ `ಮೋಬಿ ಡಿಕ್ ಕಾದಂಬರಿ ಬರೆದ. ಮಾಕ್ರ್ವಸಾಸ್ ಮತ್ತು ತಹಿ ದ್ವೀಪಗಳಲ್ಲಿ ಇದ್ದು ಗಳಿಸಿದ ಅನುಭವ ಟೈಪೀ, ಓಮೂ ಮತ್ತು ಮಾರ್ಡಿ ಕಾದಂಬರಿಗಳಿಗೆ ಹಿನ್ನೆಲೆ ಒದಗಿಸಿತು. ಈತನ ಮೊದಲ ಐದು ಕಾದಂಬರಿಗಳಾದ ಟೈಪೀ (1846); ಓಮೂ (1847); ಮಾರ್ಡಿ (1849); ರೆಡ್ ಬರ್ನ್ (1849) ಮತ್ತು ವೈಟ್ ಜಾಕೆಟ್ (1850) - ಇವು ತುಂಬ ಯಶಸ್ಸು ತಂದವು. ಮೆಸಾಚುಸೆಟ್ಸನಲ್ಲಿ ಹಾಥಾರ್ನ್‍ನ ನೆರೆಯವನಾಗಿ ಆತನ ಆಪ್ತಮಿತ್ರನಾದ. ಇವನ ಅತ್ಯುತ್ತಮ ಕಾದಂಬರಿ ಮೋಬಿ ಡಿಕ್ (1851) ಹಾಥಾರ್ನ್‍ಗೆ ಅರ್ಪಿತವಾಗಿದೆ. ಮೋಬಿ ಡಿಕ್ ಹೊರಬಂದಾಗಿನಿಂದ ಮೆಲ್‍ವಿಲ್‍ನ ಜನಪ್ರಿಯತೆ ಕಡಿಮೆಯಾಗತೊಡಗಿತು. ದಿ ಪಿಯಜ್ಜಾ ಟೆಲ್ಸ್ (ಕೈ ಸಾಲೆಯ ಕತೆಗಳು - 1856) ಉತ್ತಮ ಕಥಾಸಂಕಲನವಾಗಿದ್ದು ಆ ಕಾಲದ ವ್ಯಾಪಾರೀ ಪ್ರವೃತ್ತಿ ಮತ್ತು ಸ್ವಾರ್ಥಲೋಲುಪತೆಗಳನ್ನು ವ್ಯಂಗ್ಯವಾಗಿ ಚಿತ್ರಿಸುತ್ತದೆ. ಜಾನ್ ಮೊರ್ ಅಂಡ್ ಸೈಲರ್ಸ್ (1888), ಟೈಮೋಲಿಯನ್ (1891) ಮತ್ತು ಧಾರ್ಮಿಕ ಶ್ರದ್ಧೆಯ ಶೋಧನೆಗೆ ಸಂಬಂಧಿಸಿದ ಕ್ಲಾರೆಲ್ (1876) ಈತನ ಕೆಲವು ಕವನಗಳು.  ಮೆಲ್‍ವಿಲ್ 19 ವರ್ಷಗಳ ಕಾಲ ಸುಂಕದಕಟ್ಟೆಯಲ್ಲಿ ಸಣ್ಣ ವೃತ್ತಿಯಲ್ಲಿದ್ದು ಕಷ್ಟದಲ್ಲಿ ಕಾಲವಾದ. ಜೀವಿತ ಕಾಲದಲ್ಲಿ ಇವರ ಕೃತಿಗಳಿಗೆ ತಕ್ಕ ಮನ್ನಣೆ ದೊರೆಯದಿದ್ದರೂ 1920 ರಿಂದ ಈಚೆಗೆ ಸಾಹಿತ್ಯಲೋಕ ಇವನ ಕೃತಿಗಳತ್ತ ವಿಶೇಷ ಗಮನ ಹರಿಸಿ ಮೆಲ್‍ವಿಲ್‍ನನ್ನು ಪ್ರಸಿದ್ಧ ಸಾಹಿತಿಗಳಲ್ಲಿ ಒಬ್ಬನೆಂದು ಗೌರವಿಸಿದೆ.

	ಮೋಬಿ ಡಿಕ್ (ಆರ್ ದಿ ವೇಲ್) 1851 ರಲ್ಲಿ ಪ್ರಕಟವಾದ ಕಾದಂಬರಿ. ಬೇಟೆ ಹಡಗಿನ ಪ್ರಯಾಣದ ವಸ್ತುವಿನ ಚೌಕಟ್ಟಿನಲ್ಲಿ ಒಳಿತಿಗೂ ಕೆಡುಕಿಗೂ ನಡೆದ ಘರ್ಷಣೆಯನ್ನು ಸಾಂಕೇತಿಕವಾಗಿ ಚಿತ್ರಿಸುವ ಈ ರೂಪಕಕಥೆ ಮೆಲ್‍ವಿಲ್‍ನ ಅತ್ಯುತ್ತಮ ಕೃತಿ ಎನಿಸಿಕೊಂಡಿದೆ.

	ಇಸ್ಮಾಯಿಲ್ ಎಂಬ ಬಹಿಷ್ಕøತ ತರುಣನೊಬ್ಬ ನವೆಂಬರಿನ ನಿರುತ್ಸಾಹಕ ಹವೆಗೆ ಬೇಸರಗೊಂಡು ನ್ಯೂ ಬೆಡ್‍ಫೋರ್ಡ್‍ಗೆ ಹೋಗಿ ಪೀಕಾಡ್ ಎಂಬ ಬೇಟೆ ಹಡಗಿನಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಊರೆಲ್ಲ ಸುತ್ತಿ ಪಾದ್ರಿ ಮ್ಯಾಪಲ್‍ನ ಸಾಂಕೇತಿಕ ಪ್ರಾರ್ಥನೆಯನ್ನು ಕೇಳಿಬಂದ ಮೇಲೆ ಕ್ರಿಸ್‍ಮಸ್ ದಿನದಂದು ಆ ಹಡಗಿನಲ್ಲಿ ಪ್ರಯಾಣ ಹೊರಡುತ್ತಾನೆ. ಹಡಗಿನ ಕ್ಯಾಪ್ಟನ್ ಅಹಬ್‍ನಿಗೆ ಒಮ್ಮೆ ತನ್ನ ಕಾಲನ್ನೇ ಬಲಿ ತೆಗೆದುಕೊಂಡ ಮೋಬಿ ಡಿಕ್ ಎಂಬ ಬಿಳಿ ತಿಮಿಂಗಿಲವನ್ನು ಹಿಡಿಯುವ ಹುಚ್ಚು ಹತ್ತಿರುತ್ತದೆ. ಪ್ರಯಾಣ ಹೊರಟಾದ ಮೇಲೆ ಎಲ್ಲರಿಗೂ ತನ್ನ ಉದ್ದೇಶ ತಿಳಿಸಿ ಆ ಬಿಳಿ ತಿಮಿಂಗಿಲವನ್ನು ಮೊದಲು ಪತ್ತೆ ಮಾಡುವವರಿಗೆ ಒಂದು ಡಬ್ಲೂನನ್ನು (ಒಂದು ಪೌಂಡ್ ಬೆಲೆಯ ಚಿನ್ನದ ನಾಣ್ಯ) ಬಹುಮಾನವಾಗಿ ಘೋಷಿಸಿ ಅದನ್ನು ಹಡಗಿನ ಕಂಬಕ್ಕೆ ಕಟ್ಟುತ್ತಾನೆ. ಆ ತಿಮಿಂಗಿಲ ಹಡಗಿನವರಲ್ಲಿ ಪ್ರತಿಯೊಬ್ಬನಿಗೂ ಅವನವನ ಸಂಸ್ಕಾರಕ್ಕನುಗುಣವಾಗಿ ಒಂದೊಂದು ರೀತಿಯಾಗಿ ಭಾಸವಾಗುತ್ತದೆ. ಅಹಬ್‍ನಿಗೆ ಅದು ಮಾನವರ ಹೃದಯಸ್ಥವಾಗಿದ್ದು ಕ್ರಮೇಣ ಅವರ ಅಂತರಂಗವನ್ನೇ ಭಕ್ಷಿಸಿಬಿಡುವ ಎಲ್ಲ ಅಸುರೀಶಕ್ತಿಗಳ ಸಾಕಾರರೂಪವಾಗಿ ಕಂಡರೆ, ಇಸ್ಮಾಯಿಲನಿಗೆ ಆ ಬಿಳಿ ತಿಮಿಂಗಿಲ ಪ್ರಕೃತಿಯ ತಳದಲ್ಲಿ ಅಡಗಿರುವ ಲೋಕದ ಪೈಶಾಚಿಕತೆಯಾಗಿ ತೋರುತ್ತದೆ. ಸಾಮಾನ್ಯ ಸ್ವಭಾವದ ಸ್ಟಾರ್‍ಬಕ್‍ನಿಗೆ ಮನುಷ್ಯರನ್ನು ತಿನ್ನುವ ಅದರ ಕ್ರೌರ್ಯ ಕೇವಲ ಸಹಜ ಸ್ವಭಾವವಾಗಿ ಕಾಣುತ್ತದೆ. ಟ್ಯಾಷೆಟ್ ಗೋ ಎಂಬ ಇಂಡಿಯನ್, ಆಫ್ರಿಕದ ಡ್ಯಾಗೂ, ನೀಗ್ರೋ ಹುಡುಗ ಪಿಪ್ ಮತ್ತು ಫೆಡಲ್ಲಾ ಹಾಗೂ ರಹಸ್ಯಶೀಲರಾದ ಅವನ ಏಷ್ಯ ಸಂಗಡಿಗರು ಇವರು ಪ್ರಯಾಣಿಕರಲ್ಲಿ ಕೆಲವರು. ಪೀಕಾಡ್ ಹಡಗನ್ನು ಪ್ರಪಂಚದ ಸುತ್ತ ಕರೆದೊಯ್ಯುವ ಈ ಕಥಾವಸ್ತು ತಿಮಿಂಗಿಲಗಳ ಪ್ರಕೃತಿ ಅವನ್ನು ಬೇಟೆಯಾಡುವ ಕಲೆ ಮತ್ತ ಅದರ ಇತಿಹಾಸಗಳ ಸಂಕ್ಷಿಪ್ತ ಚರ್ಚೆಯನ್ನೊಳಗೊಂಡಿದೆ. ಅನೇಕ ತಿಮಿಂಗಿಲಗಳ ಬೇಟೆ ನಡೆಯುತ್ತದೆ. ಆದರೆ ಬಿರುಗಾಳಿ, ಮಿಂಚು ಪ್ರಾರಂಭವಾಗುತ್ತದೆ. ಪ್ರಯಾಣಿಕರಲ್ಲಿ ಒಬ್ಬ ನೀರಿನಲ್ಲಿ ಮುಳುಗಿಹೋಗುತ್ತಾನೆ. ಅಹಬ್‍ನ ಪ್ರೀತಿಪಾತ್ರನಾದ ಪಿಪ್‍ನಿಗೆ ಹುಚ್ಚುಹಿಡಿದು ಸನ್ನಿವೇಶ ಭಯಂಕರವಾಗುತ್ತದೆ. ಕಡೆಯಲ್ಲಿ ಬಿಳಿ ತಿಮಿಂಗಿಲ ಕಾಣಿಸಿಕೊಂಡು ಅದರ ಬೇಟೆಯ ಯತ್ನ ಶುರುವಾಗುತ್ತದೆ. ಮೊದಲ ದಿನ ಮೋಬಿ ಡಿಕ್ ಒಂದು ಮೀನುದೋಣಿಯನ್ನು ಅಪ್ಪಳಿಸಿ ನಾಶ ಮಾಡುತ್ತದೆ. ಎರಡನೆಯ ದಿನ ಮತ್ತೊಂದು ದೋಣಿಯನ್ನು ಮುಳುಗಿಸಿ ಅಹಬ್‍ನ ದಂತದ ಕಾಲನ್ನು ಸೆಳೆದುಕೊಳ್ಳುತ್ತದೆ. ಇಸ್ಮಾಯಿಲ್ ಒಬ್ಬನನ್ನು ಬಿಟ್ಟು ಉಳಿದವರೆಲ್ಲ ಹಡಗಿನೊಡನೆ ನೀರಿನ ತಳ ಕಾಣುತ್ತಾರೆ. ಇಸ್ಮಾಯಿಲ್ ಒಬ್ಬ ಮಾತ್ರ ಬೇರೊಂದು ಬೇಟೆ ಹಡಗಿನ ಸಹಾಯ ಪಡೆದು ಸಾವಿನಿಂದ ಪಾರಾಗುತ್ತಾನೆ.								  
 (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ